ಧಾರೇಶ್ವರ
ಕುಮಟ - ಹೊನ್ನಾವರ ರಸ್ತೆಯಲ್ಲಿ ಕುಮಟದಿಂದ 3  ಮೈಲಿ ದೂರದಲ್ಲಿರುವ ಒಂದು ಹಳ್ಳಿ.  ಇಲ್ಲಿಯ ಸುಂದರವಾದ ಶಿಲಾ ನಿರ್ಮಿತ ಪಂಚಕೇಶ್ವರ ದೇವಾಲಯ ಕರಾವಳಿ ಪ್ರದೇಶದಲ್ಲೇ ಅಪರೂಪದ್ದೆನಿಸಿಕೊಂಡಿದೆ.  ಬನವಾಸಿ, ಭಟ್ಕಳ, ಹಾಡುವನಹಳ್ಳಿ, ಸೋಂದ - ಹೀಗೆ ಕೇವಲ ಕೈಬೆರಳುಗಳಲ್ಲಿ ಎಣಿಸುವಷ್ಟು ಶಿಲಾನಿರ್ಮಿತ ದೇವಾಲಯಗಳಿರುವ ಸ್ಥಳಗಳಲ್ಲಿ ಧಾರೇಶ್ವರ ಪ್ರಮುಖವಾದ್ದು. ಸರಳವಾದ ಚಾಳುಕ್ಯಶೈಲಿಯ ದೇವಾಲಯಗಳಿಗೆ ಮಾದರಿಯಾಗಿರುವ ಪಂಚಕೇಶ್ವರ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಂದೆ ಚಾಚಿರುವ ಮುಖಮಂಟಪಗಳಿವೆ.  ಈ ದೇವಾಲಯದ ವಿನ್ಯಾಸ ಚೌಕವಾಗಿದ್ದರೂ ಗರ್ಭಗೃಹದ ಹೊರಗೋಡೆಗಳು ಹಲವು ಮುಖಗಳಾಗಿ ಒಡೆದು ನಡುವಿನ ಭಾಗ ಮುಂಚಾಚಿದಂತಿದೆ.  ದೇವಾಲಯದ ತಳಹದಿ ಐದು ಬಗೆಯ ಅಡ್ಡಪಟ್ಟಿಕೆಗಳಿಂದ ಅಲಂಕೃತವಾಗಿದೆ.  ಗರ್ಭಗೃಹದ ಮೇಲೆ ನಾಲ್ಕು ಅಂತಸ್ತುಗಳಲ್ಲಿ  ಮೇಲೇರುವ ಶಿಖರ ಸುಂದರವಾದ ಚಾಳುಕ್ಯ ಶೈಲಿಯದು.  ಈಗ ಭದ್ರತೆಯ ದೃಷ್ಟಿಯಿಂದ ಅದರ ಬಹುಭಾಗವನ್ನು ಗಾರೆಯಿಂದ ಮುಚ್ಚಲಾಗಿದೆ.  ಗೋಪುರದ ಮೊದಲ ಅಂತಸ್ತಿನ ಮೂರು ಕಡೆಗಳಲ್ಲೂ ನಡುವೆ  ಸುಂದರವಾದ ಮೂರ್ತಿಗಳನ್ನು ಕಾಣಬಹುದು.  ಒಂದು ಕಡೆ ಭೈರವ, ಹಿಂದೆ ಅಕ್ಷಮಾಲ ತ್ರಿಶೋಲ ಡಮರು ಫಲಕಗಳನ್ನು ಹೊಂದಿದ ಚತುರ್ಭುಜ ಶಿವನ ಸುಖಾಸೀನ ಮೂರ್ತಿ, ಮತ್ತೊಂದು ಕಡೆ ನೃತ್ಯಕಾಳಿ, ಒಂದೊಂದು ಮೂರ್ತಿಯೂ ಭಾವಯುಕ್ತವಾಗಿ ಸತ್ತ್ವಪೂರ್ಣವಾಗಿ ಶಿಲ್ಪಿತವಾಗಿವೆ. ನೇರವಾದ ಮತ್ತು ಸರಳವಾದ ಗೋಡೆಗಳುಳ್ಳ ನವರಂಗಕ್ಕೆ ಮೂರು ದಿಕ್ಕುಗಳಲ್ಲೂ ಪ್ರವೇಶದ್ವಾರಗಳು; ಮೇಲೆ ದೊಡ್ಡ ಆಕಾರದಲ್ಲಿ ಬಳುಕಿರುವ ಲೋವೆ, ಒಳಭಾಗದಲ್ಲಿ ಸುತ್ತಲೂ ಜಗತಿ, ಒರಗಿಕೊಳ್ಳಲು ಅನುಕೂಲವಾಗಿರುವಂತೆ ಕಟಾಂಜನ, ನಡುವಿನ ದಪ್ಪ ಕಂಬಗಳು ಮತ್ತು ಸುತ್ತಲೂ ಜಗತಿಯ ಮೇಲಿರುವ ಕಿರುಗಂಬಗಳು ಚಾಳುಕ್ಯರೀತಿಯ ಶ್ರೇಷ್ಠ ಮಾದರಿಗಳು.  ಬುಡದಲ್ಲಿ ಚೌಕಾಕೃತಿಯಲ್ಲಿರುವ, ತಿರುಗಣೆಯಲ್ಲಿ ಗುಂಡಾಗಿ ಕಡೆಯಲಾದ ಪಟ್ಟಿಕೆಗಳನ್ನೂ ಗಂಟೆಯ ಆಕೃತಿಯನ್ನೂ ಕಲಶ ಚಕ್ರ ಮುಂತಾದವನ್ನೂ ಉಳ್ಳ ಈ ಕಂಬಗಳು ಕುಬಟೂರಿನ ಕೈಟಭೇಶ್ವರ ದೇವಾಲಯ, ಹರಿಹರದ ಹರಿಹರೇಶ್ವರ ದೇವಾಲಯಗಳಲ್ಲಿರುವ ಅತ್ಯಂತ ಸುಂದರವಾದ ತಿರುಗಣೆಯ ಕಂಬಗಳನ್ನು ನೆನಪಿಗೆ ತರುತ್ತವೆ.  ಗಂಟೆಯ ಆಕೃತಿಯ ಮೇಲೆ ಮಣಿಹಾರಗಳ ಸಾಲುಗಳನ್ನು ಬಿಡಿಸಿರುವುದಂತೂ ಮನೋಜ್ಞವಾಗಿದೆ.  ನಡುವಿನ ಪಟ್ಟಿಕೆಯ ಮೇಲೆ ಹೂವಿನ ಸಾಲಿದೆ.  ಮೇಲೆ ಚಕ್ರಾಕೃತಿಯ ಅಂಚಿನ ಸುತ್ತಲೂ - ಇರುವ  ಮಣಿತೋರಣ ಅದರ ಸೌಂದರ್ಯವನ್ನು ಇಮ್ಮಡಿಸಿದೆ.  ನವರಂಗದ ಒಳಚಾವಣೆಯ ನಡುವಣ ಅಂಕಣದಲ್ಲಿ ಮಾತ್ರ ಪೂರ್ಣವಾಗಿ ಅರಳಿದ ಹಲವು ಸುತ್ತು ಎಸಳುಗಳನ್ನು ಕಮಲವನ್ನು ಅರೆಯಬ್ಬಿಸಿ ಬಿಡಿಸಿದೆ.  ಜಗತಿಯ ಕಿರುಗಂಬಗಳ ಮೇಲೆ ಅರೆಗೊಳವೆಯ ಆಕೃತಿಗಳಿವೆ.  ಸುಖನಾಸಿಯ ಬಾಗಿಲಿನ ಎರಡು ಕಡೆಯೂ ನವರಂಗದ ಗೋಡೆಯಲ್ಲಿನ ಗೂಡುಗಳಲ್ಲಿ ಗಣೇಶ ವೇಣುಗೊಪಾಲರ ಮೂರ್ತಿಗಳಲ್ಲದೆ ಮತ್ತೊಂದು ಕುಳಿತಿರುವ ದೇವತೆಯ ಮೂರ್ತಿಯಿದೆ.   ಈಗ ಅದು ಭಿನ್ನವಾಗಿದೆ.  ದೇವಾಲಯದ ಸುತ್ತಲೂ ವಿಶಾಲವಾದ ಅಂಗಳ,  ಅದನ್ನು ಸುತ್ತುವರಿದು ಎತ್ತರವಾದ ಪ್ರಾಕಾರದ ಗೋಡೆ ಈ ಗೋಡೆಗೆ ಸೇರಿದಂತೆ ಒಂದು ಮೂಲೆಯಲ್ಲಿ ಎತ್ತರವಾದ ಜಗತಿಯ ಮೇಲೆ ನಿರ್ಮಿತವಾಗಿರುವ ಒಂದಂಕಣದ ಮತ್ತೊಂದು ಶಿವಾಲಯ;  ಇದರ ಗೋಡೆಗಳು ಆಳವಿಲ್ಲದ ಅರೆಮಂಟಪಗಳಿಂದ ಅಲಂಕೃತವಾಗಿವೆ. ಪ್ರಾಕಾರದ ಹೊರಗೋಡೆಗೆ ಹೊಂದಿಕೊಂಡಂತಿರುವ ಎತ್ತರವಾದ ಗುಡ್ಡವೊಂದರ ಮೇಲೆ ಕಾಡು ಮರಗಳ ನಡುವೆ ಜಂಬಿಟ್ಟಿಗೆಯಿಂದ ಕಟ್ಟಿರುವ ಇನ್ನೊಂದು ಶಿವಾಲಯವಿದೆ.  ಅದರ ಮೇಲಿನ ಗುಂಡಾದ ಗೋಪುರ ಬಿದ್ದುಹೋಗಿದೆ.

ಪಂಚಕೇಶ್ವರ ದೇವಾಲಯದ ಮುಂದೆ ಪ್ರಾಕಾರದ ಬಾಗಿಲನ್ನು ಪ್ರವೇಶಿಸುತ್ತಿದ್ದಂತೆಯೇ ಒಂದು ಕೊಳವುಂಟು.  ಈ ಕೊಳದ ಪಕ್ಕದಲ್ಲಿ ಎರಡು ವೀರಗಲ್ಲುಗಳಿದ್ದುವು-ಒಂದು, 8 ಅಡಿ ಎತ್ತರ 3 ಅಡಿ ಅಗಲದ 5 ಶಿಲ್ಪಪಟ್ಟಿಕೆಗಳುಳ್ಳ ಸುಂದರ ವೀರಗಲ್ಲು,  ಇದನ್ನು ಭವ್ಯವಾಗಿ ಕಂಡರಿಸಲಾಗಿದೆ.  ಇದೇ ಅಂಗಳದಲ್ಲಿರುವ ಒಂದು ಶಾಸನದ ಕಲ್ಲಿನಲ್ಲಿ ಅಪರೂಪವಾದ ಶಿಲ್ಪಗಳಿವೆ.  ಶಾಸನದ ಅಕ್ಷರಗಳು ದಪ್ಪನಾಗಿ ಗುಂಡಗಿವೆ.  ಶಕ 1005  ರಲ್ಲಿ ರಾಣಿಯೊಬ್ಬಳು ದತ್ತಿಯನ್ನು ಬಿಟ್ಟ ವಿಷಯವನ್ನು ಈ ಶಾಸನ ತಿಳಿಸುತ್ತದೆ.  ಈ ಶಾಸನದ ಕಲ್ಲಿನ ವಿಶೇಷವೆಂದರೆ ಸಾಮಾನ್ಯವಾಗಿ ಬೇರೆ ದತ್ತಿ ಶಾಸನಗಳಲ್ಲಿ ಕಂಡುಬರದ ಶಿಲ್ಪವಿವರಣೆ.  ದಾನ ಕೊಡುವಾಗ ಹಸುವಿನ ಬಾಲವನ್ನು ಹಿಡಿದು ಮತ್ತೊಂದು ಕೈಯನ್ನು ಮುಂದೆ ಚಾಚಿದ್ದಾಳೆ ರಾಣಿ;  ಮುಂದೆ ಹಸುವಿನ ಮುಖದ ಬಳಿ ಕೈಯನ್ನಿಟ್ಟು ದಾನ ಪಡೆಯುತ್ತಿದ್ದಾರೆ ಬ್ರಾಹ್ಮಣರು. ಹಸುಕರುಗಳನ್ನು ಸುಂದರವಾಗಿ ಕಂಡರಿಸಿದೆ.  ಇದರ ಮೇಲಿನ ಪಟ್ಟಿಕೆಗಳೆರಡರಲ್ಲೂ ವೈಭವದಿಂದ ಒಡ್ಡೋಲಗದಲ್ಲಿ ಕುಳಿತ ರಾಜ ರಾಣಿಯರು; ಮಂತ್ರಿ ಪುರೋಹಿತವರ್ಗಗಳಿಂದ ಕೂಡಿದ ಆಸ್ಥಾನದ ಸುತ್ತಲೂ ಹಲವು ಭಂಗಿಗಳಲ್ಲಿ ನಿಂತ ಯೋಧರ ಸಾಲು; ಅಲ್ಲಿಂದ ಮೇಲೆ ದೇವಾಲಯ; ಅಲ್ಲಿ ನಡೆಯುತ್ತಿರುವ ಪೂಜೆ; ಅದನ್ನು ಭಕ್ತಿಯಿಂದ ವೀಕ್ಷಿಸುತ್ತಿರುವ ರಾಣಿ- ಈ ಎಲ್ಲ ಶಿಲ್ಪಗಳೂ ಅಪರೂಪವಾಗಿ ಸುಂದರವಾಗಿದ್ದು ಬೇರೆ  ಶಾಸನದ ಕಲ್ಲುಗಳಲ್ಲಿ ಕಾಣಲಾಗದಂಥವು. 

ದೇವಾಲಯದ ಮುಂದೆ ವಿಶಾಲವಾದ ತೇರಿನ ಬೀದಿಯುಂಟು.  ಈ ಬೀದಿಯಲ್ಲೊಂದು ಭಿನ್ನವಾದ ಯೋಗಾನರಸಿಂಹ  ಮೂರ್ತಿಯನ್ನು ಕಾಣಬಹುದು.  ಈ ಬೀದಿಯ ಅಂಚಿನಲ್ಲಿ ಮತ್ತೆರಡು ವೀರಗಲ್ಲುಗಳಿವೆ.  ಅವುಗಳಲ್ಲೂ ಶಾಸನಗಳಿಲ್ಲ.  ಆದರೂ ಧಾರೇಶ್ವರ ಒಂದು ಕಾಲದಲ್ಲಿ ವೀರರ ಬೀಡಾಗಿತ್ತೆಂಬುದನ್ನು ಇವು ಸಾರುತ್ತವೆ.  ಧಾರೇಶ್ವರಕ್ಕೆ ಕೆಲವು  ಫರ್ಲಾಂಗುಗಳ ದೂರದಲ್ಲಿ  ನಾಗಶೃಂಗ ಪರ್ವತವಿದೆ.   ಇದರ ಬುಡದಲ್ಲಿ ಒಂದು ಸಣ್ಣ ಗವಿ, ಆ ಗವಿಯ ಒಳಹೊಕ್ಕರೆ ಒಂದು ಪುಟ್ಟ ಕೊಳ.  ಮೂರಾರು ನಾಗರಕುಲ್ಲುಗಳು ಈ ಕೊಳದ ಸುತ್ತಲೂ ತುಂಬಿವೆ.  ಕೊಳದ ಪಕ್ಕದಲ್ಲಿಯೇ ಸಣ್ಣದೊಂದು ಗುಡಿ.  ಜಂಬಿಟ್ಟಿಗೆಯಿಂದ  ಕಟ್ಟಿರುವ ಈ ಗುಡಿಯಲ್ಲಿರುವ ಚೌಕಪಾಣಿ ಪೀಠದ ಮೇಲಿರುವ ದೊಡ್ಡ ಲಿಂಗ ತಕ್ಕಷ್ಟು ಪುರಾತನವಾದ್ದು.  ಈ ಗುಡಿಗೆ ಹಲವು ಗಜಗಳ ದೂರದಲ್ಲಿ ರಸ್ತೆಯಂಚಿನಲ್ಲೇ ಇತ್ತೀಚೆಗೆ ಕಟ್ಟಿದ ಗುಡಿಸಿಲೊಂದಿದೆ. ಆದರೆ ಇದರ ಒಳಹೊಕ್ಕರೆ ಹೆಚ್ಚು ಸುಂದರವಾದ ಶಿಲ್ಪಗಳೆರಡನ್ನು ಕಾಣಬಹುದು.  ಒಂದು ಉಗ್ರನರಸಿಂಹ ಮೂರ್ತಿ.  ಬಲಗಾಲನ್ನು ಇಳಿಬಿಟ್ಟು ಕುಳಿತು ಎಡಗಾಲಿನಿಂದ ಹಿರಣ್ಯಕಶಿಪುವನ್ನು ತೊಡೆಯ ಮೇಲೆ ಇರಿಸಿಕೊಂಡು ಎರಡು ಕೈಗಳಿಂದ ಅವನ ಹೊಟ್ಟೆಯನ್ನು ಬಗಿಯುತ್ತ, ಕರುಳನ್ನು ಹಾರದಂತೆ ಮತ್ತೆರಡು ಕೈಗಳಿಂದ ಮೇಲೆತ್ತಿರುವ ಉಗ್ರನರಸಿಂಹನ ಮೂರ್ತಿ ಭಯ ಹುಟ್ಟಿಸುವಂತಿದೆ.  ಮೂರ್ತಿ ಚಿಕ್ಕದಾದರೂ ಕಂಡರಣೆ ಸೊಗಸಾದ್ದು.  ಇನ್ನೊಂದು ಮೂರ್ತಿ ತಮಾಲವೃಕ್ಷದ ತಮಾಲ ಅಡ್ಡಗಾಲು ಹಾಕಿ ಕೊಳಲೂದುತ್ತ ನಿಂತಿರುವ ವೇಣುಗೋಪಾಲ.  ತಮಾಲ ವೃಕ್ಷ ಮೇಲೆ ಗುಂಡಾಗಿ ಛತ್ರಿಯಂತಿದೆ.  ಹಿಂದಿನ  ಪ್ರಭಾವಳಿಯಲ್ಲಿ ಬಳ್ಳಿಸುರುಳಿಗಳು;  ಒಂದೊಂದು ಸುರುಳಿಯಲ್ಲೂ  ದಶಾವತಾರ ಒಂದೊಂದು ಮೂರ್ತಿ. ಮೇಲೆ ಕೀರ್ತಿಮುಖ.  ಕೆಳಗೆ ಇಕ್ಕೆಲಗಳಲ್ಲೂ ಚಾಮರಧಾರಿಣಿಯರು.  ಸುತ್ತಲೂ ಹಲವಾರು ಮೃಗಪಕ್ಷಿಗಳೂ ಗೋಪಗೋಪಿಯರೂ ತದೇಕಚಿತ್ತ ಆಸ್ವಾಧಿಸುತ್ತಿರುವ ವೇಣುನಾದ ಮಾಧುರ್ಯ.  ಶಂಖ ಚಕ್ರ ಗದಾ ಪದ್ಮಗಳನ್ನು ಮೂರ್ತಿ ಎರಡು ಕಡೆಯೂ ಬೇರೆ ಬೇರೆಯಾಗಿ ಕಂಡರಿಸಿದೆ.  ಕೊಳಲಿನ ಒಂದು ತುದಿಯಲ್ಲಿ ನೀಳವಾಗಿ  ಇಳಿಬಿದ್ದಿರುವ ಮುತ್ತಿನ ಚಂಗು.  ಹಲವು ಬಗೆಯ ಆಭರಣಗಳಿಂದ, ಅಲಂಕರಣಗಳಿಂದ ತುಂಬಿಹೋಗಿರುವ ಈ ಮೂರ್ತಿಯ ಮುಖದಲ್ಲಿ ಅಲೌಕಿಕ ನಗೆ ಹೊಮ್ಮುತ್ತದೆ.  ವೇಣುಗಾನ ಲೋಲ ಭಾವ ಸುಂದರವಾಗಿ ಅಭಿವ್ಯಕ್ತವಾಗಿದೆ.  ಕಿವಿಗಳಲ್ಲಿ ಅಗಲವಾದ ಪದ್ಮಕುಂಡಲಗಳು,  ಹಿಂದೆ ಗುಂಟುಹಾಕಿ ತುರುಬು ಕಟ್ಟಿರುವ ತಲೆಗೂದಲು, ನೆತ್ತಿಗೆ ಮುತ್ತಿನ ಪಟ್ಟಿಕೆಗಳಿಂದ ಅಲಂಕೃತವಾದ ಈ ಮೂರ್ತಿ ಶ್ರೇಷ್ಠಮಟ್ಟದ ಶಿಲ್ಪ ಕಲೆಯೆಂದೆನಿಸಬಹುದಾದರೂ  ಇದು ಪ್ರಮಾಣಬದ್ಧವಾಗಿರುವಂತೆ ಕಂಡುಬರುವುದಿಲ್ಲ.  ಆ ಮೂರ್ತಿಯ ಆಕಾರಕ್ಕೆ ಕಾಲುಗಳು ಹೆಚ್ಚು ನೀಳವೆಂದು ಅನಿಸುತ್ತದೆ.
(ಎಂ.ಎಚ್.)

ಸ್ಕಾಂದಪುರಾಣದಲ್ಲಿ ಧಾರೇಶ್ವರ ಕುರಿತು ಉಲ್ಲೇಖವುಂಟು.  ರಾವಣ ತಪಸ್ಸು ಮಾಡಿ ಶಿವನ ಆತ್ಮಲಿಂಗ ಪಡೆದ.  ಅದನ್ನು ಲಂಕೆಗೆ ಒಯ್ಯುತ್ತಿರುವಾಗ ಸಂಜೆಯಾಯಿತು.  ಆತ್ಮಲಿಂಗವನ್ನು ನೆಲದ ಮೇಲೆ ಇಡಬಾರದೆಂಬ ಕಾರಣದಿಂದ ಬಳಿಯಲ್ಲೇ ಓಡಾಡುತ್ತಿದ್ದ ವಟುವೇಶಧಾರಿ ಗಣಪತಿಯ ಕೈಗೆ ಅದನ್ನಿತ್ತು ರಾವಣ ಸಂಧ್ಯಾವಂದನೆಯಲ್ಲಿ ತೊಡಗಿದೆ.  ಸಂಧ್ಯಾವಂದನೆ ಮುಗಿಯುವ ಮೊದಲೇ ಗಣಪತಿ ಪೂರ್ವಯೋಜನೆಯಂತೆ ನೆಲದ ಮೇಲೆ ಆತ್ಮಲಿಂಗವನ್ನು ಇಟ್ಟ. ಆತ್ಮಲಿಂಗ ಅಲ್ಲೇ ಉಳಿಯಿತು.  ಕೋಪಗೊಂಡ  ರಾವಣ ಆತ್ಮಲಿಂಗವನ್ನು  ಕೀಳಲು ಯತ್ನಿಸಿ ವಿಫಲನಾದ. ಆ ಲಿಂಗ ಗೋಕರ್ಣದಲ್ಲಿ ಸ್ಥಾಪಿತವಾಯಿತು.  ಲಿಂಗಕ್ಕೆ  ಕಟ್ಟಿದ ದೋರ (ಆಚ್ಚಾದಿತ ವಸ್ತ್ರ) ಅಂಟಿಕೊಂಡ ಗುಣ, ಲಿಂಗವನ್ನು ಹಾಕಿದ್ದ, ಸಜ್ಜಕ - ಇವು ಕೈಗೆ ಕಿತ್ತುಬಂದವು.  (ಲಿಂಗವೇ ಚೂರು ಚೂರಾಗಿ ಕೈಗೆ ಬಂತು ಎಂದೂ ಹೇಳುವುದುಂಟು.)

ಭಗ್ನ ಮನೋರಥನಾದ ರಾವಣ ಆ ದೋರಕ ಗುಣವಸ್ತ್ರಗಳನ್ನು ಗೋಕರ್ಣದಿಂದ ದಕ್ಷಿಣಕ್ಕೂ ಸಜ್ಜಕವನ್ನು  ಉತ್ತರಕ್ಕೂ ಎಸೆದ.  ದೋರಕ ನಾಗಶೃಂಗ ಪರ್ವತದ ಬಳಿ ನೆಲೆಸಿ ಧಾರೇಶ್ವರ ಎಂದು ಪ್ರಸಿದ್ಧವಾಯಿತು.  ಗುಣ ಬಿದ್ದ ಜಾಗ ಗುಣವಂತೆಯಾಗಿ, ವಸ್ತ್ರ ಬಿದ್ದ ಸ್ಥಳ ಮುರುಡೇಶ್ವರವಾಗಿ ಸಂಪುಟ ಬಿದ್ದ ಸ್ಥಳ ಸಜ್ಜೇಶ್ವರವಾಯಿತೆಂದು ಪುರಾಣ ಕಥೆ.  ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.
(ಜಿ.ಯು.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ